ದೇ, ಸುಶೀಲ ಕುಮಾರ
1890-1968. ಪ್ರೊಫೆಸರ್ ಸುಶೀಲ ಕುಮಾರ ದೇ ಅವರು ಆಧುನಿಕ ಭಾರತೀಯ ಸಂಸ್ಕøತ ವಿದ್ವಾಂಸರಲ್ಲಿ ಅಗ್ರಪಂಕ್ತಿಗೆ ಸೇರತಕ್ಕವರು. ಹುಟ್ಟಿದ್ದು ಕಲ್ಕತ್ತದಲ್ಲಿ, ವಿದ್ಯಾಭಾಸ ಕಲ್ಕತ್ತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಆಯಿತು. ವಿದ್ಯಾರ್ಥಿದೆಸೆಯಲ್ಲಿಯೇ ಬಹಳ ಮೇಧಾವಿಗಳೆಂದು ಪ್ರಶಸ್ತಿ ಗಳಿಸಿದರು. ಬಿ.ಎ. ಆನರ್ಸ್ ಮತ್ತು ಎಂ.ಎ. ಡಿಗ್ರಿಗಳಿಗೆ ಇಂಗ್ಲಿಷ್ ಸಾಹಿತ್ಯವೇ ಇವರ ಮುಖ್ಯ ವಿಷಯವಾಗಿತ್ತು; ಸಂಸ್ಕøತ ಮತ್ತು ತತ್ತ್ವಶಾಸ್ತ್ರ ಗೌಣ ವಿಷಯಗಳು. ಭಾರತ ಸರ್ಕಾರದ ಶಿಷ್ಯವೃತ್ತಿಯನ್ನು ಪಡೆದು ಇವರು ಜರ್ಮನಿಯಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದ ಹರ್ಮನ್ ಯಾಕೋಬಿಯವರ ಬಳಿ ಕೆಲಕಾಲ ಸಂಸ್ಕøತ ಅಲಂಕಾರಶಾಸ್ತ್ರವನ್ನು ಅಧ್ಯಯನ ಮಾಡಿದರಲ್ಲದೆ ಸಂಸ್ಕøತ ಅಲಂಕಾರಶಾಸ್ತ್ರದ ಇತಿಹಾಸವನ್ನು ಕುರಿತು ಮೇಲ್ತರಗತಿಯ ಸಂಶೋಧನೆ ಮಾಡಿ ಲಂಡನ್ ವಿಶ್ವವಿದ್ಯಾಲಯದ ಡಿ.ಲಿಟ್. ಪದವಿಯನ್ನು ಗಳಿಸಿದರು. (1921), (ಇಂಗ್ಲಿಷ್) ಸಂಸ್ಕøತ, ಬಂಗಾಳಿ- ಈ ಮೂರೂ ಭಾಷೆಗಳಲ್ಲಿ ಉತ್ತಮ ಪ್ರಾಧ್ಯಾಪಕರೆನಿಸಿ ಢಾಕ, ಕಲ್ಕತ್ತ ಹಾಗೂ ಜೌಧವಪುರ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದರು.

 1948ರಲ್ಲಿ ಅಖಿಲ ಭಾರತ ಪ್ರಾಚ್ಯವಿದ್ಯಾ ಮಹಾಸಭೆಯ ಮುಂಬಯಿ ಅಧಿವೇಶನಕ್ಕೆ ಇವರು ಸಾಮಾನ್ಯ ಅಧ್ಯಕ್ಷರಾಗಿ ಆಯ್ಕೆಯಾದರು. ಮಹಾ ಭಾರತದ ಪರಿಷ್ಕøತ ಆವೃತ್ತಿಯ ಸಂಪಾದಕರಲ್ಲೊಬ್ಬರಾಗಿ ಇವರು ಪುಣೆಯ ಭಾಂಡಾರಕರ ಸಂಶೋಧನ ಸಂಸ್ಥೆಯಿಂದ ನೇಮಕಗೊಂಡರು. ಅಂತೆಯೇ ಪುಣೆಯ ಡೆಕ್ಕನ್ ಕಾಲೇಜ್ ಸಂಶೋಧನ ಸಂಸ್ಥೆಯ ಸಂಪಾದಕ ಸಮಿತಿಗೆ ಸರ್ಕಾರ ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿತು ಅಲ್ಲದೆ ಇವರು 1955ರಿಂದ ದೆಹಲಿ ಸಾಹಿತ್ಯ ಅಕಾಡೆಮಿಯ ಸಂಸ್ಕøತ ಸಲಹಾ ಸಮಿತಿಯ ಸದಸ್ಯರೂ 1956-57ರಲ್ಲಿ ಭಾರತ ಸರ್ಕಾರ ನೇಮಿಸಿದ ಸಂಸ್ಕøತ ಮಂಡಲಿಯ ಸದಸ್ಯರೂ ಆಗಿದ್ದರು.

 	ಇವರು ನಿಷ್ಣಾತರೆನಿಸಿ ವಿಶ್ವಾದ್ಯಂತ ಹೆಸರು ಗಳಿಸಿದುದು ತಮ್ಮ ಅಲಂಕಾರ ಶಾಸ್ತ್ರದ ಇತಿಹಾಸವನ್ನು ಕುರಿತ ಗ್ರಂಥಗಳಿಂದಲೇ ಎನ್ನಬಹುದು. ಇವು ಸಂಶೋಧನಾತ್ಮಕವೂ ವಿವರಣಾತ್ಮಕವೂ ಇರುವಂತೆ ವಿಮರ್ಶಾತ್ಮಕವಾಗಿಯೂ ಇವೆ. ಎರಡು ಸಂಪುಟಗಳಲ್ಲಿ ಲಂಡನ್‍ನ ಲ್ಯೂeóÁಕ್ ಪ್ರಕಾಶಕರು ಈ ಇತಿಹಾಸವನ್ನು 1956-25ರಲ್ಲಿ ಪ್ರಕಟಿಸಿದರು. ಇದರ ದ್ವಿತೀಯ ಆವೃತ್ತಿಯ ಪ್ರಕಟಣೆ ಕಲ್ಕತ್ತದಲ್ಲಿ 1960ರಲ್ಲಿ ಆಯಿತು. ಇಷ್ಡೇ ಪ್ರಸಿದ್ಧವಾಗಿ ಹಿಸ್ಟೊರಿ ಆಫ್ ಸಂಸ್ಕøತ ಲಿಟರೇಚರ್ ಎಂಬುದು. ಇದರಂತೆ ಕುಂತಕನ ವಕ್ರೋಕ್ತಿಜೀವಿತ, ಅಭಿನವಗುಪ್ತನ ಲೋಚನ, ನೀತಿವರ್ಮನ ಕೀಚಕವಧ-ಇವುಗಳ ಪ್ರಪ್ರಥಮ ಮುದ್ರಣ ದೇ ಅವರಿಂದ ಆಯಿತು. ರೂಪ ಗೋಸ್ವಾಮಿಯ ಪದ್ಯಾವಲಿ, ಲೀಲಾಶುಕನ ಕೃಷ್ಣಕರ್ಣಾಮೃತ, ಮಹಾಭಾರತದ ಉದ್ಯೋಗಪರ್ವ ಮತ್ತು ದ್ರೋಣಪರ್ವ, ದೇವಬೊಧನ ಮಹಾಭಾರತ ವ್ಯಾಖ್ಯೆಯಾದ ಜ್ಞಾನದೀಪಿಕಾ ಕಾಳಿದಾಸನ ಮೇಘದೂತ ಇವುಗಳನ್ನು ಶಾಸ್ತ್ರೀಯವಾಗಿ ಸಂಶೋಧಿಸಿ ಸಂಪಾದಿಸಿದ್ದಾರೆ.

ದೇ ಅವರು ಅಲಂಕಾರ ಶಾಸ್ತ್ರದ ಮೇಲೂ ಇತರ ವಿಷಯಗಳನ್ನು ಕುರಿತೂ ಹಲವಾರು ನಿಬಂಧಗಳನ್ನು ಬರೆದಿದ್ದಾರೆ ಉಪನ್ಯಾಸಗಳನ್ನು ನೀಡಿದ್ದಾರೆ, ಇವು ಸಮ್ ಪ್ರಾಬ್ಲಮ್ಸ್ ಆಫ್ ಸಂಸ್ಕøತ ಪೊಯೆಟಿಕ್ಸ್ (ಕಲ್ಕತ್ತ, 1959); ಆ್ಯಸ್‍ಪೆಕ್ಟ್ಸ್ ಆಫ್ ಸಂಸ್ಕøತ ಲಿಟರೇಚರ್ (ಕಲ್ಕತ್ತ, 1959); ಏನ್‍ಷಂಟ್ ಇಂಡಿಯನ್ ಈರೋಟಿಕ್ಸ್ ಅಂಡ್ ಈರೋಟಿಕ್ ಲಿಟರೇಚರ್ (ಕಲ್ಕತ್ತ, 1959) ಮುಂತಾದ ಗ್ರಂಥಗಳಲ್ಲಿ ಸಂಗೃಹೀತವಾಗಿ ಬಂದಿದೆ. ಇವರ ವಿದ್ವಲ್ಲೇಖನಗಳು ನೂರಾರು ಭಾರತೀಯ ಹಾಗೂ ಪಾಶ್ಚಾತ್ಯ ವಿದ್ವತ್ಪತ್ರಿಕೆಗಳಲ್ಲಿ ಸಂಭಾವನಾ ಗ್ರಂಥಗಳಲ್ಲಿ ಪ್ರಕಟವಾಗಿವೆ.

 ಭಾರತೀಯ ಸಾಹಿತ್ಯಶಾಸ್ತ್ರ ಸಂಸ್ಕøತ ಸಾಹಿತ್ಯ ಚರಿತ್ರೆಗಳ ಕ್ಷೇತ್ರದಲ್ಲಿ ಎಸ್.ಕೆ. ದೇ ಅವರ ಕೊಡುಗೆ ಹಿರಿದಾದುದು. ಅದರಂತೆ ಅವರು ಗ್ರಂಥಸಂಪಾದನೆಯ ಕ್ಷೇತ್ರದಲ್ಲೂ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ಪ್ರಬಂಧಕಾರರಾಗಿ, ಸಾಹಿತ್ಯ ರಸಿಕರಾಗಿ, ಭಕ್ತಿಪಂಥ, ಕಾಮಶಾಸ್ತ್ರ, ಕಲಾಸೂತ್ರಗಳ ವಿಮರ್ಶಕರಾಗಿ, ಅವರು ಇತರ ವಿದ್ವಾಂಸರಿಗೆ ಮಾದರಿಯಾಗಿದ್ದಾರೆ. ಅವರ ಇಂಗ್ಲಿಷ್ ಶೈಲಿ ನಿಜಕ್ಕೂ ಸಂಬದ್ಧವೂ ಗಂಭೀರವೂ ಆದುದು.
 (ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ